ಗೋಪಾಲರಾವ್ ಹಿರಿಯಡಕ

ಹಿರಿಯಡಕ ಗೋಪಾಲರಾವ್ (ಜನನ 15-12-1919) ಕರ್ನಾಟಕದ ಕರಾವಳಿಯ ಯಕ್ಷಗಾನದ ಬಡಗುತಿಟ್ಟಿನ ಪ್ರಸಿದ್ಧ ಮದ್ದಲೆ ಕಲಾವಿದರಾಗಿ, ಯಕ್ಷಗಾನ ಗುರುವಾಗಿ ಪ್ರಸಿದ್ಧರು. ಉಡುಪಿ ತಾಲೂಕಿನ ಹಿರಿಯಡ್ಕದ ಶೇಷಗಿರರಾವ್ ಲಕ್ಷ್ಮೀ ದಂಪತಿಗಳು ಇವರ ತಂದೆ-ತಾಯಿ. ಗೋಪಾಲರಾಯರು ಉಡುಪಿಯ ಅನಂತೇಶ್ವರ ದೇವಸ್ಥಾನದ ಜಗಲಿಯಲ್ಲಿದ್ದ ಪ್ರಾಥಮಿಕ ಶಾಲೆಯಲ್ಲಿಯೇ ಆರನೆಯ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದರು. 

ಗೋಪಾಲರಾಯರು ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ತನ್ನ ತಂದೆ ಶೇಷಗಿರಿರಾಯರಿಂದ ಮದ್ದಳೆಯನ್ನು, ತಂದೆಯವರ ಗುರು ನಾಗಪ್ಪ ತಮ್ತಿಯವರಿಂದ ಯಕ್ಷಗಾನ ನೃತ್ಯವನ್ನು ಕಲಿತರು. ಇವರು ವೇಷಧಾರಿಯಾಗಿ ಹಿರಿಯಡ್ಕದ ವೀರಭದ್ರ ದೇವಸ್ಥಾನದ ಮೇಳದಲ್ಲಿ ರಂಗಪ್ರವೇಶ ಮಾಡಿದ್ದು 1934ರಲ್ಲಿ. ಒತ್ತು ಮದ್ದಳೇಗಾರನಾಗಿ ಮೇಳದಲ್ಲಿ ಸೇವೆ (1936), ನಿಜಮದ್ದಳೆಗಾರನಾಗಿ ಅಮೃತೇಶ್ವರಿ ಮೇಳದಲ್ಲಿ ಸೇವೆ (1939), ಅನಂತರ 1968ರ ತನಕ ಬಡಗುತಿಟ್ಟಿನ ಭಾಗವತಿಕೆಯ ಸೀಮಾ ಪುರುಷ ಕುಂಜಾಲು ಶೇಷಗಿರಿ ತಿನಿಯವರ ಜತೆಯಲ್ಲಿ ಮದ್ದಳೆಗಾರನಾಗಿ ಮುದಾರ್ತಿ ಮೇಳದಲ್ಲಿ ಸುದೀರ್ಘ ಸೇವೆ-ಇವು ಗೋಪಾಲರಾಯರ ಕಲಾಜೀವನದ ಮೈಲುಗಲ್ಲುಗಳು.

1958ರಲ್ಲಿ ಡಾ||ಕೋಟಿ ಶಿವರಾಮ ಕಾರಂತರು ಬ್ರಹ್ಮಾವರದಲ್ಲಿ ಆಯೋಜಿಸಿದ ಪ್ರಪ್ರಥಮ ಯಕ್ಷಗಾನ ಗೋಷ್ಠಿಯಲ್ಲಿ ಗೋಪಾಲರಾಯರು ಮದ್ದಳೆಗಾರನಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಡಾ||ಕಾರಂತರು ಗೋಪಾಲರಾಯರ ಮದ್ದಳೆಯ ಮೋಡಿ, ಪ್ರತಿಭೆ, ಸೃಜನಶೀಲತೆಗಳನ್ನು ಗುರುತಿಸಿದರು. 1968ರಲ್ಲಿ ಕಾರಂತರು ಬ್ರಹ್ಮಾವರದಲ್ಲಿ ಒಂದು ವರ್ಷ ನಡೆಸಿದ ಯಕ್ಷಗಾನ ಕೇಂದ್ರದಲ್ಲಿ ಗೋಪಾಲರಾಯರು ಮುಖ್ಯ ಅಧ್ಯಾಪಕರಾಗಿದ್ದರು. ಡಾ||ಕಾರಂತರ ನಿರ್ದೇಶನದಲ್ಲಿ ಉಡುಪಿಯ ಎಂ.ಜೆ.ಎಂ. ಕಾಲೇಜಿನಲ್ಲಿ ಆರಂಭವಾದ ಯಕ್ಷಗಾನ ಕೇಂದ್ರದಲ್ಲಿ ಗೋಪಾಲರಾಯರು 1971ರಿಂದ 1976ರ ತನಕ ಗುರುವಾಗಿ ಸೇವೆ ಸಲ್ಲಿಸಿದರು. 

ಅಮೇರಿಕದ (ಯು.ಎಸ್.ಎ) ಕ್ಯಾಲಿಪೋರ್ನಿಯಾದ ಹೇವಾರ್ಡ್ ವಿಶ್ವವಿದ್ಯಾನಿಲಯದಿಂದ ಬಂದ ಮಾನವಶಾಸ್ತ್ರಜ್ಞ ಡಾ|| ಪೀಟರ್ ಜೆ. ಕ್ಲಾಸ್ 1968ರಲ್ಲಿ ಗೋಪಾಲರಾಯರಿಂದ ಒಂದು ವರ್ಷ ಮದ್ದಳೆ ಕಲಿತರು. ಡಾ|| ಕಾರಂತರ ಮಾರ್ಗದರ್ಶನದಲ್ಲಿ ಯಕ್ಷಗಾನದ ಕುರಿತು ಸುಪ್ರಬಂಧ ಬರೆಯಲು ಬಂದ ------ಅವರಿಗೆ ಗೋಪಾಲರಾಯರು ಯಕ್ಷಗಾನ ಕಲಿಸಿದರು. 1977ರಲ್ಲಿ ತನ್ನ ಶಿಷ್ಯೆ ------- ರೊಂದಿಗೆ ಅಮೇರಿಕಕ್ಕೆ ಭೇಟಿ ನೀಡಿದ ಗೋಪಾಲರಾಯರು ಹದಿನಾಲ್ಕು ಕಡೆ ಯಕ್ಷಗಾನ ಪ್ರಾತ್ಯಕ್ಷಿಕೆ ನೀಡಿದರು. 1979-80ರಲ್ಲಿ ಪ್ರೊ. ಬಿ.ವಿ.ಆಚಾರ್ಯರ ನೇತೃತ್ವದಲ್ಲಿ ಎರಡನೇ ಬಾರಿ ವಿದೇಶ  ಪ್ರವಾಸ ಮಾಡಿದಾಗ ಗೋಪಾಲರಾಯರು ಅಮೇರಿಕದಲ್ಲಿ ಹದಿನಾಲ್ಕು, ಜರ್ಮನಿಯಲ್ಲಿ ನಾಲ್ಕು ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದರು. ಬಿ.ವಿ.ಕಾರಂತರ ನಿರ್ದೇಶನದಲ್ಲಿ  ಕಲ್ಕತ್ತದಲ್ಲಿ (1982) ನಡೆದ ಕಲಾಗೋಷ್ಠಿಯಲ್ಲಿ ಗೋಪಾಲರಾಯರು ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ ನೀಡಿದರು. 

ಹಿರಿಯಡ್ಕ ಗೋಪಾಲರಾಯರು 1993-95ರಲ್ಲಿ ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದರು. ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1972), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ (1997), ಕರ್ನಾಟಕ ಸರಕಾರದ `ಜಾನಪದಶ್ರೀ ಪ್ರಶಸ್ತಿ (1998), ಪೇಜಾವರ ಮಠದ ಶ್ರೀ ವಿಶ್ವೇಶ್ವತೀರ್ಥ ಸ್ವಾಮಿಗಳು ನೀಡಿದ ರಾಮವಿಠಲ ಪ್ರಶಸ್ತಿ (2003), ಉಡುಪಿಯ ಯಕ್ಷಗಾನ ಕಲಾರಂಗದವರ ದಶಾವತಾರಿ ----- ರಾಮಕೃಷ್ಣ ಹೆಬ್ಬಾರ, ಭಾಗವತ ವಾದಿರಾಜ ಹೆಬ್ಬಾರ ಪ್ರಶಸ್ತಿ (2004)-ಇವು ಗೋಪಾಲರಾಯರು ಪಡೆದ ಮುಖ್ಯ ಪ್ರಶಸ್ತಿಗಳು.
ಜಪಾನಿನಲ್ಲಿ ನಡೆದ ಏಷಿಯನ್ ಕಲ್ಚರಲ್ ಸೆಮಿನಾರ್‍ನ ಸಂದರ್ಭದಲ್ಲಿ ಪ್ರಕಟವಾದ ಡಾನ್ಸ್ ಆ್ಯಂಡ್ ಮ್ಯೂಸಿಕ್ ಇನ್ ಸೌತ್ ಇಂಡಿಯನ್ ಡ್ರಾಮ (1981) ಗ್ರಂಥದಲ್ಲಿ ಮದ್ದಳೆಯ ಲಯವಿನ್ಯಾಸವನ್ನು ಕುರಿತ ಗೋಪಾಲರಾಯರ ಲೇಖನ ಪ್ರಕಟವಾಗಿದೆ. ಗೋಪಾಲರಾಯರ ಆತ್ಮಕತೆ ಮದ್ದಳೆಯ ಮಾಯಾಲೋಕ (ನಿರೂಪಣೆ ಡಾ|| ಕೆ.ಎಂ. ರಾಘವ ನಂಬಿಯಾರ್) 1997ರಲ್ಲಿ ಪ್ರಕಟವಾಗಿದೆ. ಇದು ಇಪ್ಪತ್ತನೆಯ ಶತಮಾನದ ಇತಿಹಾಸಕ್ಕೆ ಸಂಬಂಧಪಟ್ಟ ಸಮೃದ್ಧ ವಿವಿರಗಳಿರುವ ಅಮೂಲ್ಯ ಸಾಂಸ್ಕøತಿಕ ದಾಖಲೆಯಾಗಿದೆ.
									(ಮುರಳೀಧರ ಉಪಾಧ್ಯ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ